ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಬಕ್ರೀದ್ ಪ್ರಯುಕ್ತ ಬಿಗಿ ಬಂದೋಬಸ್ತ: ಸಿ‌ಆರ್‌ಪಿ‌ಎಫ್ ಭಟ್ಕಳಕ್ಕೆ

ಭಟ್ಕಳ: ಬಕ್ರೀದ್ ಪ್ರಯುಕ್ತ ಬಿಗಿ ಬಂದೋಬಸ್ತ: ಸಿ‌ಆರ್‌ಪಿ‌ಎಫ್ ಭಟ್ಕಳಕ್ಕೆ

Wed, 18 Nov 2009 19:59:00  Office Staff   S.O. News Service
ಭಟ್ಕಳ, ನವೆಂಬರ್ ೧೮: ಮುಸ್ಲೀಮರ ಪವಿತ್ರ ಹಬ್ಬ ‘ಬಕ್ರೀದ್’ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಶಾಂತಿ ಕದಡುವುದನ್ನು ತಡೆಗಟ್ಟಲು ಮುನ್ನೆಚ್ಚರಿಕೆಯ ಕ್ರಮವಾಗಿ ಭಟ್ಕಳಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ ಏರ್ಪಡಿಸಲಾಗಿದೆ. ಆಯಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದ್ದು, ಹಿಂಸಾತ್ಮಕ ಚಟುವಟಿಕೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಈಗಾಗಲೇ 3 ಕರ್ನಾಟಕ ಮೀಸಲು ಪೊಲೀಸ್ ಪಡೆ(ಕೆ‌ಎಸ್‌ಆರ್‌ಪಿ) ಹಾಗೂ 5 ಜಿಲ್ಲಾ ಮೀಸಲು ಪೊಲೀಸ್ ಪಡೆಗಳು (ಡಿ‌ಆರ್) ರಕ್ಷಣೆಗಾಗಿ ಭಟ್ಕಳದಲ್ಲಿಯೇ ಬೀಡು ಬಿಟ್ಟಿವೆ. ಡಿವಾಯ್‌ಎಸ್ಪಿ ವೇದಮೂರ್ತಿ, ಪ್ರೋಬೆಷನರಿ ಡಿವಾಯ್‌ಎಸ್ಪಿ ಕುಮಾರಸ್ವಾಮಿ ಹಾಗೂ ಸಿಪಿ‌ಐ ಗುರುಮತ್ತೂರು ನೇತೃತ್ವದಲ್ಲಿ ಬಂದೋಬಸ್ತ ಕಾರ್ಯ ಚುರುಕುಗೊಂಡಿದೆ. ಮಂಗಳವಾರ ನಡೆದ ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಎಡಿಶನಲ್ ಎಸ್ಪಿ ವಿ.ಬಿ.ಗಾಂವಕರ ಪಾಲ್ಗೊಂಡಿದ್ದು, ಈ ಸಂಬಂಧ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳನ್ನು ವಿವರಿಸಿದ್ದಾರೆ. 
 
ಸಿ‌ಆರ್‌ಪಿ‌ಎಫ್ ಆಗಮನ: ಕೋಮು ಸೂಕ್ಷ್ಮ ಪ್ರದೇಶಗಳಲ್ಲಿ ಒಂದು ಎಂದು ಗುರುತಿಸಲಾದ ಭಟ್ಕಳಕ್ಕೆ 15  ಜನರನ್ನೊಳಗೊಂಡ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿ‌ಆರ್‌ಪಿ‌ಎಫ್)ಯ ಭಾಗವಾದ ತ್ವರಿತ ಕಾರ್ಯಾಚರಣಾ ತಂಡ ಭಟ್ಕಳಕ್ಕೆ ಆಗಮಿಸಿದೆ. ಇಲ್ಲಿಯ ಬಂದರು ರಸ್ತೆಯಲ್ಲಿರುವ ಜಟಗನ ಮನೆ, ಮಾರಿಕಟ್ಟಾ, ಸುಲ್ತಾನ್ ಸ್ಟ್ರೀಟ್ ಸೇರಿದಂತೆ ಕೆಲವು ಆಯಕಟ್ಟಿನ ಪ್ರದೇಶಗಳಿಗೆ ತಂಡ ಮಂಗಳವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಸಲೀಮ್ ಕುಮಾರ್ ತಂಡದ ನೇತೃತ್ವವನ್ನು ವಹಿಸಿದ್ದರು. ಇಲ್ಲಿಯ ಪರಿಸ್ಥಿತಿಯ ಅವಲೋಕನ ನಡೆಸಲು ತಂಡ ಇನ್ನೂ ಕೆಲವು ದಿನಗಳ ಕಾಲ ಇಲ್ಲಿಯೇ ತಂಗುವ ಸಾಧ್ಯತೆ ಇದೆ ಎನ್ನಲಾಗಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯ ಎಸೈ ಕರ್ನಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.


Share: